dear ವಿಜಯ್..
ನಿಂಗೆ ಹಾಗಂತ ಯಾರು ಹೆಸರಿಟ್ಟರೋ, ಯಾಕಾದರೂ ಇಟ್ಟರೋ? ಆದರೆ ನಾನು ಮಾತ್ರ , ಎಲ್ಲವನ್ನು ಜಯಿಸಿದವಳ, ಎಲ್ಲದರಲ್ಲೂ ವಿಜಯವೇ ಸಿಕ್ಕಿದವಳ ತರಹ ಆಡ್ತಿದೀನಿ. ನನ್ನ ಸಂಭ್ರಮ ಕಂಡು ಮನೆಯವರಿಗೆಲ್ಲ ಆಶ್ಚರ್ಯ. ಅಮ್ಮನಿಗೆ ಸಣ್ಣ ಅನುಮಾನ. ನನ್ನ ಸಮಸ್ಯೆ ಏನೆಂದರೆ, ನಂಗೆ ಮನಸ್ಸಿನ ಭಾವನೆಯನ್ನು ಮುಚ್ಚಿಟ್ಕೊಕೊಳ್ಳೋಕೆ ಬರುವುದಿಲ್ಲ. ಸಿಟ್ಟು, ಪ್ರೀತಿ, ಸಂತೋಷ, ಹೊಟ್ಟೆಕಿಚ್ಚು - ಉಹುಂ. ನನಗೆ ಗೊತ್ತಾಗದೇನೆ ಬಯಲಾಗಿ ಬಿಡುತ್ತೆ. ನಿನ್ನ ಮುಂದೆ ನನ್ನ ಪ್ರೀತಿ ಬಯಲಾದ ಹಾಗೆ.
ವಿಜಯ್, ನಾನಾಗೆ ಪ್ರೊಪೊಸ್ ಮಾಡಿದೆ ಅಂತ ನಿನ್ನ ಕಣ್ಣಲ್ಲಿ ನಾನು cheap ಆಗಿಲ್ಲ ಅಲ್ವಾ?! ನಂಗೆ ಗೊತ್ತು, ನಿನ್ನಂತಹ ಹುಡುಗನಿಗೆ ನಂಗಿಂತ ಒಳ್ಳೆ ಹುಡುಗಿ ಸಿಗಬಹುದಿತ್ತು. ಚೆಂದಗೆ ಮಾತಾಡ್ತೀನಿ, ಬರಿತೀನಿ ಅನ್ನೊದು ನಿಜವಾದ್ರೂ, ಅದು ನನ್ನ ವ್ಯಕ್ತಿತ್ವದೊಳಗಿನ ಸೌಂದರ್ಯಕ್ಕೆ ಸಂಬಂಧಿಸಿದ ಮಾತು. ನಿಂಗಿಂತ ಚೂರು ಕುಳ್ಳಿ, ನಿಂಗಿಂತ ಚೂರು ದಡ್ಡಿ ಆದ್ರೆ ವಿಜು, ನಿನ್ನಷ್ಟಾದ್ರೂ ಒಳ್ಳೆಯವಳಾಗಿರೋದಕ್ಕೆ ಪ್ರಯತ್ನ ಮಾಡ್ತೀನಿ.
ನಂಗೆ ಚಿಕ್ಕಂದಿನಿಂದ್ಲೂ ಕೆಲವು inferiority ಗಳಿವೆ ಕಣೋ. ಇವತ್ತೆ ಹೇಳಿಬಿಡೀನಿ. ಅಪ್ಪ ಎಲ್ಲರಿಗೂ ತುಂಬಾ ಬೇಕಾದವರಾಗಿದ್ರು. ಎಷ್ಟೊಂದು ಸಂಸ್ಥೆಗಳ ಅಧ್ಯಕ್ಷರು. ಅಂತವರ ಮಗಳು ತುಂಬಾ ಬ್ರೀಲಿಯಂಟ್ ಆಗಿರಬೇಕು, ಅಂತ ನನ್ನಿಂದ ಎಲ್ಲರೂ ಏನೇನೋ expect ಮಾಡಿದ್ರು. ಆದರೆ ನಾನು ಹಾಗೆಲ್ಲ ಇರಲಿಲ್ಲ. ಇನ್ನು ನನ್ನ ತಮ್ಮ ತುಂಬಾ ಬುದ್ದಿವಂತ. ಅವತ್ತಿಗೂ, ಇವತ್ತಿಗೂ. ಅವನ ತರಹ ಇರಕ್ಕೆ ಆಗಲ್ಲ ಅನ್ನೊ ಕೊರಗು ನಂಗೆ. ಅವನನ್ನು ನೋಡಿದ್ರೆ ಹೊಟ್ಟೆಕಿಚ್ಚಾಗುತ್ತೆ. ನಿಜ ಹೇಳ್ತೀನಿ ವಿಜು, ನನ್ನನ್ನ ಯಾರಾದರೊಬ್ಬ ಹುಡುಗ ಇಷ್ಟೊಂದು ಪ್ರೀತಿಸಬಹುದು ಅಂತ ನಂಗೆ ಯಾವತ್ತೂ ಅನ್ನಿಸಿರಲಿಲ್ಲ. ಒಬ್ಬ ಹುಡುಗ ಇಷ್ಟ ಪಡುವ ಯಾವ ಗುಣಗಳು ನನ್ನಲ್ಲಿ ಇಲ್ಲ..!
ಮೊದಲನೇ ಸಲ ನೀ ಮಾತನಾಡಿಸಿದಾಗ ನಿನ್ನ ಬಗ್ಗೆ ಏನೂ ಅನ್ನಿಸಿಯೇ ಇರಲಿಲ್ಲ. ಎರಡು ದಿನ ಕಳೆಯುವ ಹೊತ್ತಿಗೆ ನಿನ್ನ ಬಗೆಗೆ ಸ್ವಲ್ಪ ಕಲ್ಪನೆ ಬಂದಿತ್ತು. ಒಂದು ವಾರದ ನಂತರ ತೀರಾ bye ಹೇಳಿ ಹೊರಡುವಾಗ ಒಂದು ಕವನ ಕೇಳಿಸಿದ್ದೆಯಲ್ಲ. ಓದಿ ನಿಜವಾಗಿಯೂ ಖುಷಿಯಾಗಿತ್ತು. ‘ಈ ಕವನ ಹೇಗಿದೆ ಅಂತ ಎರಡು ಸಾಲು ಹೇಳಿದರೆ ಹೀಗೊಂದು ಒಂಟಿ ಜೀವಕ್ಕೆ ಸಮಾಧಾನ ಆಗುತ್ತದೆ.’ ಅಂತ ಹೇಳಿದೆಯಲ್ಲ. ಆ ಮಾತು, ಹೊರಟಿದ್ದ ನನ್ನನ್ನು ಹಿಡಿದು ನಿಲ್ಲಿಸಿತ್ತು. ಎರಡು ಸಾಲು ನನಗೆ ಮಾತ್ರ ಹೇಳಿ ಎಂಬಂತಿದ್ದ ಆ ಮಾತು....! ನನ್ನ ಹೃದಯ ಕಂಪಿಸಿದ್ದು ಆಗಲೇ..! ನನಗೆ ಮಾತ್ರ ಹಾಗೆ ಕೇಳಬೇಕು ಅಂತ ಹೇಗೆ ಅನ್ನಿಸಿತೋ ನಿನಗೆ? ನಿನ್ನ ಹೃದಯದಲ್ಲೂ ಪ್ರೀತಿಯ ನೆರಳಿತ್ತಾ? ಏನು ಹೇಳ್ಬೇಕೋ ತಿಳಿಯಲಿಲ್ಲ. ಆದರೆ ನೀನು ಕೇಳಿದ್ದು ಸಂತೋಷವಾಗಿತ್ತು. ಏನೋ ಒಂದು ಅನ್ನಿಸಿದ್ದು ಹೇಳಿ ಸುಮ್ಮನೆ ಎದ್ದು ನಡೆದಿದ್ದೆ. ನಾ ಹೇಳಿದ ಮಾತುಗಳು ನಿನಗೆ ಇಷ್ಟವಾದವಾ ಅಂತಲೂ ಒಮ್ಮೆಯೂ ಕೇಳಿಕೊಂಡಿರಲಿಲ್ಲ ನಾನು. ಆದರೆ ಮರುದಿನ college ಗೆ ಹೊರಟು ಕನ್ನಡಿಯಲ್ಲಿ ಮುಖ ನೋಡಿದಾಗ ಮಾತ್ರ, ತುಟಿಯಲ್ಲಿ ಅರಳಿದ ಕಿರು ನಗುವಿನ ಜೊತೆ ನಿನ್ನ ನೆನಪಿದ್ದುದು ನಿಜ. ಅವತ್ತು ಚುಡಿ ಹಾಕಿದ್ದೆ!
ಪ್ರೊಪೋಸ್ ಮಾಡುವ ಹೊತ್ತಿಗೆ ನೀನು ನನಗೆ ಎಷ್ಟು ಅರ್ಥವಾಗಿದ್ದೆ ಅಂದ್ರೆ, ನೀನು ಒಪ್ಪದೇ ಇರೋಕೆ ಸಾಧ್ಯವೇ ಇಲ್ಲ ಅನ್ನಿಸಿತ್ತು. ಅಷ್ಟು ದೂರದಿಂದ ನನ್ನನ್ನು ಹುಡುಕಿಕೊಂಡು ಬಂದ ಹುಡುಗ ನೀನು. ಅವತ್ತು ನೀನು ಮೈಸೂರ್ ಗೆ ಹೋಗಿದ್ದಾಗ ಆ ಮೋರಿಯ ಮೇಲೆ ಕುಳಿತು ಮಾತನಾಡಿದ್ದು ನೆನಪಿದೆ. ನಿನ್ನ ಹೃದಯದಲ್ಲಿ ಓಲವಿನ ಮಿಡಿತವುತ್ತು. ಎಲ್ಲರೂ ಮಲಗಿರುವಾಗ, ಆ ನಡು ರಾತ್ರಿಯಲ್ಲಿ ಸುಮ್ಮನೆ ಕುಳಿತು ಸಣ್ಣಗೆ ಹಾಡಿಕೊಳ್ಳುತ್ತಿದ್ದೆಯಲ್ಲ... ನೀ ಹಾಡದಿದ್ದರೂ ನಾನೇ ಕೇಳುತ್ತಿದ್ದೆನೇನೋ. ನಿನ್ನ ಹಾಡನ್ನು ಕೇಳುತ್ತಾ ಮಲಗಿದವಳಿಗೆ ಲೈಫ್ ಎಷ್ಟು ಚೆನ್ನಗಿದೆ ಅಂತ ಮೊದಲ ಬಾರಿಗೆ ಅನ್ನಿಸಿತ್ತು. ನಿನ್ನ ಹಾಡುಗಳು ನನ್ನ ಮನದ ಬಾಗಿಲನ್ನು ತಟ್ಟಿದ್ದವು. ಬಾಗಿಲು ತೆರೆದುಕೊಂಡಾಗ ಒಳಬಂದ ಹಾಡುಗಳಿಂದ ಪ್ರಜ್ವಲಿಸಿದ ಬೆಳಕು ಮೈಯ್ಯನ್ನೆಲ್ಲಾ ಪುಳಕಗೊಳಿಸಿತ್ತು. ಯಾಕೋ ಅಂದೆ mobile ಗೆ ನಮ್ಮ ಮೇಲೆ ಮುನಿಸು. ಇರುವ ಒಂದು ರೂಪಾಯಿ ಕರೆನ್ಸಿಯಲ್ಲಿ ನೀನು ಏನೋ ಹೇಳಲು ನಿಂತಿದ್ದೆ. ಹೇಳುವ ಧೈರ್ಯವಾಗದೆ, ನೀವೆ ಏನಾದರೂ ಹೇಳಿ ಅಂದಿದ್ದೆ.
ಕೊನೆಗೂ ಹೇಳಿದವಳು ನಾನೇ ಅಲ್ಲವಾ?!
ಹೇಳುವ ಹೊತ್ತಿಗೆ ನಮ್ಮಿಬ್ಬರಿಗೂ ನಾವು ಪ್ರೀತಿಸುತ್ತಿದ್ದೆವೆಂಬುದು ಗೊತ್ತಾಗಿಹೋಗಿತ್ತು. ಹೇಳಿಕೊಳ್ಳದಿದ್ದರೂ ಹಾಡು ಹೊಮ್ಮುತ್ತಿತ್ತೆನೋ..?! ಅಂದು ರಾತ್ರಿ ನೀನು, ‘ಕೈ ಹಿಡಿದುಕೊಂಡು ಕೊನೆಯವರೆಗೂ ಕಾಯ್ದು ಬಿಡ್ರಿ’ ಅಂತ ಅಂದಾಗ ಮಾತ್ರ ‘ವಿವಶವಾಯಿತು ಪ್ರಾಂ ಹಾ.....’ ನೀನು ಗಂಭೀರವಾಗಿ ಏನೋ ಮಾತನಾಡುತ್ತಿದ್ದೆ. ನಾನು ಮಾತನಾಡಲಾರದೇ ನಿನ್ನಲ್ಲಿ ಹಾಡು ಹುಡುಕುತ್ತಿದ್ದೆ. ಮನೆಗೆ ಹೋಗಿ ಬೇಗ ಬಂದು ಬಿಡ್ರಿ, ನನ್ನ ಯಾವಾಗಲಾದ್ರು ನೆನಪಿಸಿಕೊಳ್ರಿ ಅಂದೆ ನೀನು. ಊರಿಗೆ ಹೋದಾಗ ನನ್ನ ಜೊತೆ ನಿನ್ನ ನೆನಪಿತ್ತು. ಯಾಕೋ ಗೊತ್ತಿಲ್ಲ, ನಿನಗೋಸ್ಕರ ಈ ಪ್ರಪಂಚದಲ್ಲಿ ಯಾರನ್ನು ಬೇಕಾದರೂ ದೂರ ಮಾಡಿಕೊಳ್ಳಬಲ್ಲೆ ಅಂತ ಅನ್ನಿಸಿತ್ತು. ಮನೆಯಲ್ಲಿ ಅಮ್ಮ ಕೇಳಿದ್ದಳು.. ಏನು ಈ ಸಂತೋಷಕ್ಕೆ ಕಾರಣ?!
ಏನಂತ ಹೇಳ್ಬೇಕೋ ಗೊತ್ತಾಗಿರಲಿಲ್ಲ. ನನ್ನಂಥ ಹುಡುಗಿಯರಿಗೆ ಒಬ್ಬ ಗೆಳೆಯ, ಅವನ ಪ್ರೀತಿ, ಒಂದು ಹಾಡು, ಒಂದೇ ಒಂದು ಪುಟ್ಟ ಪತ್ರ, ಸುಮ್ಮನೆ ಹುಟ್ಟಿಕೊಳ್ಳುವ ಕವನಗಳು, ಒಂದು ಸಂಬಂಧ - ಈ ಬದುಕಿಗಿಂತ ತುಂಬ ಮುಖ್ಯವಾಗಿ ಬಿಡುತ್ತವೆ ಅಂತ ನನಗೆ ನೀ ಸಿಗುವವರೆಗೂ ಅರ್ಥವಾಗಿರಲೇ ಇಲ್ಲ. ಚಿಕ್ಕಂದಿನಿಂದ ಎತ್ತಿಟ್ಟುಕೊಂಡಿದ್ದ ಅಷ್ಟು ಕವನಗಳು ನಿನ್ನ ಸನಿಧಿಗೆ. ಪ್ರತಿ ಗಳಿಗೆಯೂ ಒಂದೊಂದು ಪುಟ್ಟ ಪುಟ್ಟ ಕನಸುಗಳು ಹುಟ್ಟುತ್ತವೆ. ನನ್ನ ಬೊಗಸೆಯಲ್ಲಿ ಮೊಗೆಮೊಗೆದು ಕೊಡುತ್ತೇನೆ. ನಿನಗೆ ಬದುಕು, ಪ್ರೀತಿ ಬೇಸರವಾಗದಂತೆ, ಹೊಸ ಕನಸನ್ನು ಹುಡುಕಿ ನೀ ಹೋಗದಂತೆ ನಾ ಕಾಯ್ದುಕೊಳ್ಳುತ್ತೆನೆ. ನಿನ್ನ ಅಷ್ಟು ಪ್ರೀತಿಯನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತೆನೆ.
ರಂಜು..
ಪ್ರಕಾಶ ಹೆಗಡೆಗೆ ಪುಸ್ತಕೋತ್ಸವ!
7 ಗಂಟೆಗಳ ಹಿಂದೆ

9 comments:
ranjana,
ಒಬ್ಬ ಹುಡುಗ ಇಷ್ಟ ಪಡುವ ಯಾವ ಗುಣಗಳು ನನ್ನಲ್ಲಿ ಇಲ್ಲ..!
I salugalannu heluvalina vinayavathikeye idi lekanadalidu lekanada yashassigi ade karanavirabahudu. kelavu salugalu ishtavaguthave...
ರಂಜನಾ , ನಿಮ್ಮ ಚಿಕ್ಕ ಚಿಕ್ಕ ಕತೆಗಳು ಓದಲು ಖುಷಿ ಕೊಡುತ್ವೆ ..ತುಂಬಾ ಚೆನ್ನಾಗಿದೆ .. ....ಕತೆ ರೂಪ ಕೊಡಕ್ಕೆ ಆಗದೆ ಇರೋ ನನ್ನ ಕೆಲವೊಂದು ಭಾನನೆಗಳನ್ನ ಇಲ್ಲಿ ಕತೆಯಾಗಿ ತಂದಿದ್ದೀರಿ .. ಧನ್ಯವಾದಗಳು ಗುಡ್ ಲಕ್ ..
ವಾಪಸ್ ಬನ್ದು ಬಿಡು, ದೇವರು ಶಾಪವಿತ್ತನಾ ಬರಹ ಇಷ್ಟವಾಯಿತು. ಮುಂದುವರಿಯಲಿ ಬರವಣಿಗೆ.
ಅಲ್ರೀ ರಂಜನಾ...ಈ ನಿಮ್ಮ ಪಯಣ ಎಷ್ಟುದಿನಕ್ಕೆ ಗುರಿ ತಲುಪಿದ್ದು ಹೇಳಲೇ ಇಲ್ಲ...ಇಲ್ಲಿ ನನ್ನ ಸ್ನೇಹಿತನೊಬ್ಬ ಮನದಮಾತಿಗೆ ಮೌನ ಬೇಲಿ ಎಂದುಕೊಂಡು ಹೇಳಿಕೊಳ್ಲದೇ ಕೊನೆಗೆ ಹೇಳಿದಾಗ...ಅಯ್ಯೋ...ಈ ವಯಸ್ಸಿನಲ್ಲಿ ಯಾಕಪ್ಪಾ ಇವನಿಗೆ ಚಪಲ....ಎಂದುಬಿಡೋದೇ...ಹಹಹಹ್.....
ನಿಮ್ಮ ಮನಗಳು ಕೂಡಿ ಎರಡು-ಒಂದಾದದಕ್ಕೆ ಶುಭಾಭಿನಂದನೆಗಳು...ಹಾಗೇ...ಒಂದು ಒಂದಾಗೇ ಇರಲಿ ಮನ...ಎಂದೇ ಹಾರೈಸೋಣ...ಚನ್ನಾಗಿ ಮೂಡಿದೆ ಬರಹ.
ನಮಸ್ಕಾರ ರಂಜನಾ,
ನಿಮ್ಮ ಬ್ಲಾಗಿಗೆ ಇದೇ ನನ್ನ ಮೊದಲ ಭೇಟಿ... ಕಸ್ತೂರಿ ಮಲ್ಲಿಗೆಯನ್ನು ನೂಲಿನೆಳೆಯಲ್ಲಿ ಪೊಣಿಸಿದಂತೆ ಅಕ್ಷರಗಳನ್ನು ಪೊಣಿಸಿದ್ದು ಮಾತ್ರವಲ್ಲದೆ, ಭಾವನೆಯಲ್ಲಿ ಅದ್ದಿ-ಅದ್ದಿ ಗುಲಾಮ್ ಜಾಮೂನ್ ಥರ ಕೊಟ್ಟಿದ್ದೀರಲ್ಲಾ... ತುಂಬಾ ಚೆನ್ನಾಗಿದೆ...
ಕಾನನದ ನಡುವೆ ಝರಿಯಾಗಿ ಹುಟ್ಟಿ ತೊರೆಯಾಗಿ ಹರಿದು ನದಿಯಾಗಿ ಸಾಗರವ ಸೇರುವ ಹಾಗೆ ನಿಮ್ಮ ಮನಸ್ಸನ್ನೆಲ್ಲ ಇನಿಯನ ಬಳಿ ಬಿಚ್ಚಿದ್ದೀರಾ...
"ಆ ನಡು ರಾತ್ರಿಯಲ್ಲಿ ಸುಮ್ಮನೆ ಕುಳಿತು ಸಣ್ಣಗೆ ಹಾಡಿಕೊಳ್ಳುತ್ತಿದ್ದೆಯಲ್ಲ... ನೀ ಹಾಡದಿದ್ದರೂ ನಾನೇ ಕೇಳುತ್ತಿದ್ದೆನೇನೋ..." ಈ ಸಾಲು ಓದುತ್ತಿದ್ದಂತೆ John Keatsನ "Heard melodies are sweet, but those unheard Are sweeter" ನೆನಪಾಯಿತು...
ವಾವ್... "ಪ್ರತಿ ಗಳಿಗೆಯೂ ಒಂದೊಂದು ಪುಟ್ಟ ಪುಟ್ಟ ಕನಸುಗಳು ಹುಟ್ಟುತ್ತವೆ. ನನ್ನ ಬೊಗಸೆಯಲ್ಲಿ ಮೊಗೆಮೊಗೆದು ಕೊಡುತ್ತೇನೆ. ನಿನಗೆ ಬದುಕು, ಪ್ರೀತಿ ಬೇಸರವಾಗದಂತೆ, ಹೊಸ ಕನಸನ್ನು ಹುಡುಕಿ ನೀ ಹೋಗದಂತೆ ನಾ ಕಾಯ್ದುಕೊಳ್ಳುತ್ತೇನೆ."
ಒಬ್ಬ ಹುಡುಗ ಇದಕ್ಕಿಂತ ಹೆಚ್ಚಿನದೇನೂ ಕನಸು ಕಾಣಲ್ವೇನೋ... ಆತ ಅದೃಷ್ಟವಂತ ಕಣ್ರೀ... ಜೊತೆಗೆ ನೀವೂ...!
ಪ್ರತಿ ನಿಮಿಷ ಅತನೊಂದಿಗೆ ನಿಮ್ಮನ್ನು, ಬದುಕು-ಪ್ರೀತಿ ಬೇಸರವಾಗದಂತಿರುವ ಹೊಸ ಹೊಸ ಕನಸುಗಳು ಚಿಗುರಲಿ ಅನ್ನುವ ಶುಭಾಷಯಗಳೊಂದಿಗೆ...
ಧನ್ಯವಾದಗಳು,
-ಗಿರಿ
its really cool
thaks for such a nice write-up
ಪ್ರೀತಿಯಿಂದ, ರಂಜು ಅಂತೀನಿ...
ರಂಜು, ನಿಮ್ಮ ದೋಣಿ ನೋಡಿದ್ದು ಮೊದಲು ಕನ್ನಡಪ್ರಭದ ಬ್ಲಾಗಾಯಣದಲ್ಲಿ. ಇದನ್ನೆಲ್ಲಾ ಯಾರಿಗೆ ಹೇಳಿಕೊಳ್ಳಲಿ ಅನ್ನೋ ಬರಹ ತುಂಬ ಇಷ್ಟ ಆಯ್ತು. ಕುತೂಹಲಕ್ಕೆ ದೋಣಿ ಏರಿದೆ. ಅಲ್ಲಿ ನಿಮ್ಮೊಂದಿಗಿನ ಮೊದಲ ಮಾತೇ 'ಅಮ್ಮನ' ಬಗ್ಗೆ. ಅದನ್ನ ಓದಿ ನನ್ನ ಕಣ್ಣುಗಳು ನೀರು ತುಂಬಿಕೊಂಡವು. ತುಂಬಾ ಚನ್ನಾಗಿ ಬರೀತೀರ ನೀವು. ನಿಮಗೆ ಒಳ್ಳೆಯದಾಗಲಿ.
ಹಾಗೇ ನಾನು ಬರೀತಾ ಇದೀನಿ. ಎಲ್ಲೋ ಒಂದ್ ಕಡೆ ಭಯ. ಹೇಗಿದಿಯೋ ಏನೋ ಅಂತ. ನೀವು ಓದಿ ಸಲಹೆ ಕೊಡ್ತೀರಾ.... ಪ್ಲೀಸ್. ನನ್ಬ್ಲಾಗ್ "ನೀನಂದ್ರೆ.ಬ್ಲಾಗ್ಸ್ಪಾಟ್.ಕಂ" . ನಾನು ದೋಣಿ ಇಟ್ಟಿದಿನಿ ಕಣ್ರೀ. ಆದ್ರೆ ಹುಟ್ಟು ಹಾಕೋದಕ್ಕೆ ಸರಿಯಾಗಿ ಬರ್ತಾ ಇಲ್ಲ ಅನ್ಸತ್ತೆ. ದಯವಿಟ್ಟು ಸರಿಪಡಿಸಿ. ಪ್ಲೀಸ್ ........
ಭಾವತೀವ್ರತೆಯಿಂದ ಕೂಡಿದ ಮನ ಮಿಡಿಯುವ ಬರಹ.
ಬಹಳ ಸ್ವಾಭಾವಿಕವಾಗಿ ಮೂಡಿ ಬಂದಿದೆ.
-ಚಂದಿನ
ಒಂದೊಂದು ಸಾಲನ್ನೂ ಮತ್ತೆ ಮತ್ತೆ ಓದಬೇಕು ಅನ್ನಿಸ್ತು ಕಣ್ರೀ.. ತುಂಬ ಲವ್ ಲವಿಕೆಯ ಬರಹ.. ತುಂಬಾ ಕ್ಯೂಟ್ ಆಗಿದೆ. ಕೊನೆಯ ಐದು ಸಾಲುಗಳನ್ನಂತೂ ಸೆಪರೇಟ್ ಆಗಿ ಎತ್ತಿಟ್ಟುಕೊಂಡಿದ್ದೇನೆ, ನಿಮ್ಮ ಪರವಾನಿಗೆ ಪಡೆಯದೇ.. ಈ ಹುಡ್ಗೀರು ಯಾರನ್ನ, ಯಾವಾಗ, ಯಾವ ಕಾರಣಕ್ಕೆ ಇಷ್ಟ ಪಡ್ತಾರೆ ಅಂತ ಗೊತ್ತೇ ಆಗಲ್ಲ ಕಣ್ರೀ. ಎನೀವೇ, ಎಲ್ಲದರಲ್ಲೂ 'ವಿಜಯ' ನಿಮ್ಮದಾಗಲಿ ಎಂದು ಹಾರೈಸ್ತೀನಿ.
- ಉಮೇಶ್
ಒಂದು ಕಮೆಂಟನ್ನು ಪೋಸ್ಟ್ ಮಾಡಿ